ಚಕ್ಕುಲಿ ಅಭಿಯಾನ

ಪ್ರತಿ ವರ್ಷದಂತೆ ಈ ವರ್ಷವೂ ಸಹ ಚಕ್ಕುಲಿ ಅಭಿಯಾನವನ್ನು ಗಣಪತಿ ಆಗಮನದ ಒಂದು ವಾರದ ಹಿಂದೆ ಆರಂಭಿಸಲಾಯಿತು. ಕೆಲವು ಚಕ್ಕುಲಿಗಳು ವರ್ತುಲಾಕಾರದಲ್ಲಿ ಮೂಡಿ ಬಂದರೆ,ಇನ್ಕೆಲವು ಮುರಿದು ಹೋದವು , ಹಾಗೆ ಮುರಿದ ಚಕ್ಕುಲಿಗಳೂ ಹಳದಿ ಹಲ್ಲುಗಳ ಮಧ್ಯದಲಿ ಅರೆದು ಹೋದವು. ಹಳದಿ ಹಲ್ಲುಗಳ ಮಧ್ಯದಲಿ ಅರೆದು ಹೋಗುತ್ತಿದ್ದ ಚಕ್ಕುಲಿಗಳ ಆಕ್ರಂದನದಲಿ ‘ಕರಂ’ ಮತ್ತು ‘ಕುರುಂ’ ಶಬ್ದಗಳ ನಡುವಿನ ಯುದ್ಧ ಕುರುಕ್ಷೆತ್ರದಂತಿತ್ತು. ಈ ಕುರುಕ್ಷೇತ್ರ ಯುದ್ಧಕ್ಕೆ ಕರಗಳು ಚಕ್ಕುಲಿಗಳ ಬಾಣ ಬಿಟ್ಟು ಚೆಂದ ನೋಡ ಹತ್ತಿದ್ದವು. ಹೀಗೆ ಮುಂದುವರಿಯುತ್ತಿದ್ದ ಚಕ್ಕುಲಿ ಅಭಿಯಾನದಲ್ಲಿ ಪ್ರತಿಯೊಬ್ಬರ ಪಾತ್ರವೂ ಅಷ್ಟೇ ಮಹತ್ವದ್ದಾಗಿತ್ತು. ಖಾಲಿಯಾಗುತ್ತಿದ್ದ ಚಕ್ಕುಲಿ ಡಬ್ಬಗಳಿಗೆ ಲೆಕ್ಕವೇ ಇಲ್ಲದಂತಾಯಿತು . ಇದನ್ನು ಕಂಡು ದಂಗಾದ ಚಕ್ಕುಲಿ ಡಬ್ಬಗಳು ಕಾಣುವ ಜಾಗದಿಂದ ಕಾಣದ ಜಾಗಗಳಿಗೆ ಮಾಯವಾಗತೊಡಗಿದವು. ಆ ಕಾಣದ ಜಾಗಗಳಿಗೆ ಮಾಯವಾದ, ಡಬ್ಬಗಳು, ಹುಟ್ಟು ಹಾಕಿದ್ದ ಹಳದಿ ಹಲ್ಲುಗಳ ಚಕ್ಕುಲಿ ಚಾಪಲ್ಯಕ್ಕೆ ಮಣಿದು ಕರಗಳಿಗೆ ಕೆಲಸವನ್ನು ಮಾಡಲು ಆದೇಶ ಹೊರಡಿಸತೊಡಗಿದವು. ಈ ಆದೇಶದಂತೆ ಕಾಣದ ಜಾಗಗಳಿಗೆ ಕಾಲ್ಗಳು ಕುಟುಕುಟನೆ ಅಗೋಚರ ಚಕ್ಕುಲಿಗಳ ಚಹರೆ ನೋಡಲು ಕಾತರದಿಂದ ಕಾಯುತ್ತಿದ್ದವು , ಹುಡುಕುತ್ತಿದ್ದವು ……………………………ಮುಂದೇನು ಸ್ವಾಮಿ ಅಂದಿರಾ ? …..ಮುಂದೆಲ್ಲ ನಿಮ್ಮದೇ …..!

Leave a comment